ಶಾಂತಿವರ್ಮ
	ಆದ್ಯ ಕದಂಬವಂಶದ ರಾಜ (ಸು.430-55). ಕಾಕುತ್ಸ್ಥವರ್ಮನ ಮಗ. ಕಾಕುತ್ಸ್ಥ ತನ್ನ ವೃದ್ಧಾಪ್ಯದಲ್ಲಿ ಸಿಂಹಾಸನ ತ್ಯಾಗಮಾಡಿ ಶಾಂತಿವರ್ಮನಿಗೆ ರಾಜ್ಯ ಬಿಟ್ಟುಕೊಟ್ಟನೆಂದು ಒಂದು ಊಹೆ. ಕಾಕುತ್ಸ್ಥವರ್ಮನ ಆಳಿಕೆಯ ಕಾಲಕ್ಕೆ ಸೇರಿದ ತಾಳಗುಂದ ಶಾಸನದಲ್ಲಿ, ಈ ಶಾಸನವನ್ನು ರಾಜ (ನೃಪತಿ) ಶಾಂತಿವರ್ಮನ ಪ್ರೇರಣೆ ಯಿಂದ ಕುಬ್ಜ ಬರೆದನೆಂದಿರುವುದರಿಂದ ಕಾಕುತ್ಸ್ಥವರ್ಮನ ಆಳಿಕೆಯ ಕೊನೆಯ ವರ್ಷಗಳಲ್ಲಿ ಶಾಂತಿವರ್ಮನ ಸಹಆಳ್ವಿಕೆಯನ್ನು ಸೂಚಿಸುವು ದೆಂತಲೂ ನಂಬಲಾಗಿದೆ.

	ಶಾಂತಿವರ್ಮನು ರಾಜ್ಯದ ದಕ್ಷಿಣ ಭಾಗವನ್ನು ಆಳಲು ತನ್ನ ತಮ್ಮ ಕೃಷ್ಣವರ್ಮನನ್ನು ನೇಮಿಸಿದ. ಇದರಿಂದ ರಾಜ್ಯದ ವಿಭಾಗವಾಯಿತೆನ್ನ ಬಹುದು. ಸಾಮಂತ ರಾಜರು ಮಾಡಲಾಗದ ಅಶ್ವಮೇಧಯಾಗವನ್ನು ಕೃಷ್ಣವರ್ಮನು ಮಾಡಿ ತನ್ನ ಸ್ವಾತಂತ್ರ್ಯವನ್ನು ಸಾರಿಕೊಂಡ. ಕದಂಬ ರಾಜ್ಯಕ್ಕೆ ಪಲ್ಲವರಿಂದಲೂ ವಿಪತ್ತು ಒದಗಿತು. ಇದನ್ನು ತಡೆಗಟ್ಟಲು ಶಾಂತಿವರ್ಮನ ಹಿರಿಯ ಸಹೋದರ ಕುಮಾರ ವರ್ಮ ಉಚ್ಚಂಗಿಯಲ್ಲಿ ನೆಲೆಸಿದ. ಹೀಗೆ ಇವನ ಕಾಲದಲ್ಲಿ ಕದಂಬ ರಾಜ್ಯ ಮೂರು ಭಾಗವಾಗಿ ಬನವಾಸಿಯಲ್ಲಿ ಶಾಂತಿವರ್ಮ, ಉಚ್ಚಂಗಿಯಲ್ಲಿ ಕುಮಾರವರ್ಮ ಮತ್ತು ತ್ರಿಪರ್ವತದಲ್ಲಿ ಕೃಷ್ಣವರ್ಮ ಆಳಲಾರಂಭಿಸಿದರು. ಶಾಂತಿವರ್ಮನ ಮಗ ಮೃಗೇಶವರ್ಮ ಮೊದಲು ಒಂದು ಜಿಲ್ಲೆಯ ಅಧಿಪತಿಯಾಗಿದ್ದು ತಂದೆಯ ನಿಧನಾನಂತರ ದೊರೆಯಾದ.	
	(ಎ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ